	ಕ್ರೈಲ್, ಚಾರ್ಜ್ ವಾಷಿಂಗ್‍ಟನ್  	
1864-1943.  ಅಮೆರಿಕದ ಅತ್ಯಂತ ಪ್ರಖ್ಯಾತ ಶಸ್ತ್ರವೈದ್ಯ.  ಶಸ್ತ್ರಚಿಕಿತ್ಸೆಯ ಆಘಾತವನ್ನು ಕುರಿತು ಈತ ಆಳವಾದ ಪ್ರಯೋಗಗಳನ್ನು ನಡೆಸಿದ (1897).  ಅಲ್ಲದೆ ಶಸ್ತ್ರವೈದ್ಯದಲ್ಲಿ ರಕ್ತದ ಒತ್ತಡವನ್ನೂ (1903) ಆಘಾತದಲ್ಲಿ ರಕ್ತ ಸಂಯೋಜನೆಯನ್ನೂ (1909) ಅಧ್ಯಯನ ಮಾಡಿದ.  ಈ ಸಂಶೋಧನೆಗಳ ಫಲವಾದ ಆಘಾತ ಸಿದ್ಧಾಂತವನ್ನು ಕ್ರೈಲ್ 1913ರಲ್ಲಿ ಪ್ರಕಟಿಸಿದ.  ಅದಕ್ಕೆ ಕ್ರೈಲ್ ಸಿದ್ಧಾಂತ ಎಂಬ ಹೆಸರು ಬಂದಿತು.  ಶಸ್ತ್ರಚಿಕಿತ್ಸೆ ಮಾಡುವಾಗ ಸ್ಥಳೀಯ ಅರಿವಳಿಕೆಯನ್ನು ಉಪಯೋಗಿಸಿ ನರಗಳ ಕಾಂಡದಲ್ಲಿ ತಡೆಯನ್ನು ಉಂಟುಮಾಡುವುದನ್ನು 1906ರಲ್ಲಿ ಕಂಡುಹಿಡಿದ.

	1864ನೆಯ ನವಂಬರ್ 11ರಂದು ಚಿಲಿಯಲ್ಲಿ ಜನಿಸಿದ ಕ್ರೈಲ್ ಅಮೆರಿಕದ ಒಹಾಯೋ ವಿಶ್ವವಿದ್ಯಾಲಯ ಮತ್ತು ವೂಸ್ಟರ್ ವಿಶ್ವವಿದ್ಯಾಲಯದ ವೈದ್ಯಶಾಲೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ಬಳಿಕ ಲಂಡನ್, ವಿಯನ್ನಾ ಮತ್ತು ಪ್ಯಾರಿಸುಗಳಲ್ಲೂ ಅಧ್ಯಯನ ಮುಂದುವರಿಸಿದ.  ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಫ್ರಾನ್ಸಿನಲ್ಲಿ ಅಮೆರಿಕ ಸ್ಥಾಪಿಸಿದ್ದ ಒಂದು ಆಸ್ಪತ್ರೆಯಲ್ಲಿ ಕ್ರೈಲ್ ನಿರ್ದೇಶಕನಾಗಿಯೂ ಸಮಾಲೋಚಕನಾಗಿಯೂ ಕೆಲಸ ಮಾಡುತ್ತಿದ್ದ.  ಹಲವಾರು ಉತ್ತಮ ವೈದ್ಯ ಗ್ರಂಥಗಳನ್ನು ರಚಿಸಿ ಪ್ರಸಿದ್ಧನಾಗಿದ್ದಾನೆ.  1943ನೆಯ ಜನವರಿ 7ರಂದು ಕ್ರೈಲ್ ತೀರಿಕೊಂಡ.                             (ಎಸ್.ಎಚ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ